ನಾಮಕರಣ
	ಮಗು ಹುಟ್ಟಿದ ಇಂತಿಷ್ಟು ದಿನಗಳಲ್ಲಿ ಅದಕ್ಕೆ ಹೆಸರಿಟ್ಟು ಸಂತೋಷವನ್ನು ವ್ಯಕ್ತಪಡಿಸುವ ಒಂದು ಸಮಾರಂಭ; ಪ್ರಪಂಚಾದ್ಯಂತ ಆಚರಣೆಯಲ್ಲಿರುವ ಒಂದು ಸಾಮಾಜಿಕ ಪದ್ದತಿ. ಮನುಷ್ಯನ ಜೀವನದಲ್ಲಿ ನಡೆಯುವ ಪ್ರಮುಖ ಸಂಸ್ಕಾರಗಳಲ್ಲಿ ಒಂದು.

	ನಾಮಕರಣ ಎಲ್ಲ ದೇಶಗಳಲ್ಲಿ ಪ್ರಚಲಿತವಿದ್ದರೂ, ಆಚರಣಾ ವಿಧಿವಿಧಾನಗಳಲ್ಲಿ ಜನಾಂಗದಿಂದ ಜನಾಂಗಕ್ಕೆ, ಪಂಗಡದಿಂದ ಪಂಗಡಕ್ಕೆ ಬಹಳಷ್ಟು ವ್ಯತ್ಯಾಸ ವೈವಿಧ್ಯಗಳಿರುವುದನ್ನು ಕಾಣಬಹುದು. ಕೆಲವು ಕಡೆ ಮಹಮದೀಯರು ಮಗು ಹುಟ್ಟಿದ ದಿನವೇ ನಾಮಕರಣ ನೆರವೇರಿಸಿದರೆ ಜುನೀಸರು 4-5 ವರ್ಷದ ಅನಂತರ ಆಚರಿಸುತ್ತಾರೆ. ಅಲ್ಲಿಯವರೆಗೆ ಮೂರನೆಯ ವರ್ಷದವ, ನಾಲ್ಕನೇಯ ವರ್ಷದವ, ಐದನೇ ವರ್ಷದವ ಎಂದೇ ಹೇಳುತ್ತಾರೆ. ಹಿಂದುಗಳಲ್ಲಿ ಸಾಮಾನ್ಯವಾಗಿ 11 ಅಥವಾ 12 ನೆಯ ದಿನಗಳಲ್ಲಿ ಆಚರಿಸುವುದು ವಾಡಿಕೆ. ಕ್ಷತ್ರೀಯರು 16ನೆಯ ದಿನ, ವೈಶ್ಯರು 19 ನೆಯ ದಿನ, ಶೂದ್ರರು 12, 20, 22 ಅಥವಾ 32 ನೆಯ ದಿನ ನಾಮಕರಣ ಮಾಡುತ್ತಾರೆ. ಮನುಸ್ಮøತಿಯಲ್ಲಿ ಮಗು ಹುಟ್ಟಿದ 10 ಅಥವಾ 15ನೆಯ ದಿನದೊಳಗಾಗಿ ನಾಮಕರಣ ಮಾಡುವುದು ಶುಭ ಎಂದಿದೆ. ಗೋಭಿಲನ ಪ್ರಕಾರ 10 ಅಥವಾ 11 ನೆಯ ದಿನ ಶುಭ.

	ಹೆಸರಿನ ಆಯ್ಕೆಗೆ ಸಂಬಧಿಸಿದ ಕೆಲವು ನಿಯಮಗಳವೆ. ಬ್ರಾಹ್ಮಣನಿಗೆ ಶರ್ಮ ಎಂದೂ ಕ್ಷತ್ರೀಯನಿಗೆ ವರ್ಮ ಎಂದೂ ವೈಶ್ಯನಿಗೆ ಭೂತಿ, ಗುಪ್ತ ಅಥವಾ ದತ್ತ ಎಂದೂ ಶೂದ್ರನಿಗೆ ದಾಸ ಎಂದೂ ಉಪನಾಮಗಳಿರಬೇಕೆಂದು ಮನು ಹೇಳಿದ್ದಾನೆ. ಸಾಂಖ್ಯಾಯನ ಮಗುವಿಗೆ ಎರಡು ಹೆಸರುಗಳನ್ನು ಇಡಬೇಕು ಎಂದಿದ್ದಾನೆ. ಸೂತ್ರದ ಪ್ರಕಾರ ಹೆಸರಿನಲ್ಲಿ ಎರಡು ಅಥವಾ ನಾಲ್ಕು ಸ್ವರಗಳಿದ್ದು ಮಧ್ಯೆ ಅರ್ಧಸ್ವರ ಮತ್ತು ಕೊನೆಯಲ್ಲಿ ವಿಸರ್ಗವಿರಬೇಕು. ಹಿರಣ್ಯಕೇಶಿ ಮಗುವಿಗೆ ಮೂರು ಹೆಸರುಗಳನ್ನಿಡಬೇಕೆಂದು ಅಭಿಪ್ರಾಯಪಡುತ್ತಾನೆ.

	ಸಾಮಾನ್ಯವಾಗಿ ಮಗುವಿಗೆ ಕುಲದೇವತೆ ಅಥವಾ ಪೂರ್ವಜರ ಹೆಸರುಗಳನ್ನು ಇಡುವುದು ಬಹಳಷ್ಟು ಕಡೆ ರೂಢಿಯಲ್ಲಿದೆ. ಪುನರ್ಜನ್ಮದಲ್ಲಿ ನಂಬಿಕೆ ಉಳ್ಳವರು ತಮ್ಮ ಮಕ್ಕಳಿಗೆ ಪೂರ್ವಜರ ಹೆಸರನ್ನೇ ಇಡುವುದರ ಮೂಲಕ ಸತ್ತವರು ಮತ್ತೆ ಬಂದರೆಂದು ತಿಳಿದು ಮನಸ್ಸಿಗೆ ಹರ್ಷ ಹಾಗೂ ನೆಮ್ಮದಿಗಳನ್ನು ತಂದುಕೊಳ್ಳುತ್ತಾರೆ. ಗ್ರೀಕರು, ಹಿಂದೂಗಳು, ನ್ಯೂಗಿನಿ ಹಾಗೂ ಕೊರಿಯದವರು ಮತ್ತು ಪ್ರಪಂಚದ ಇತರ ದೇಶಗಳವರು ಪೂರ್ವಜರ ಹೆಸರನ್ನೇ ಹೆಚ್ಚಾಗಿ ಇಡುವುದು ಕಂಡುಬರುತ್ತದೆ. ಇದಕ್ಕೆ ನಿದರ್ಶನವಾಗಿ ಅನೇಕ ರಾಜವಂಶಾವಳಿಗಳಲ್ಲಿ ಹೆಸರುಗಳು ಪುನರಾವರ್ತಿತವಾಗಿರುವುದನ್ನು ಕಾಣಬಹುದು.

	ಹೆಸರನ್ನು ಆಯ್ಕೆ ಮಾಡುವ ರೀತಿ ಜನಾಂಗದಿಂದ ಜನಾಂಗಕ್ಕೆ ಬೇರೆ ಬೇರೆಯಾಗಿರುತ್ತದೆ. ಹುಟ್ಟಿದ ನಕ್ಷತ್ರಕ್ಕೆ ಅನುಗುಣವಾಗಿ ಕೆಲವರು ಹೆಸರನ್ನು ಆಯ್ಕೆ ಮಾಡಿದರೆ ಮತ್ತೆ ಕೆಲವು ದೇಶಗಳಲ್ಲಿ ಕನಸುಗಳಿಂದ, ದೈವಗಳ ಸಹಾಯದಿಂದ ಇಡಬೇಕಾದ ಹೆಸರನ್ನು ಪಡೆದುಕೊಳ್ಳುತ್ತಾರೆ. ಬ್ರೆಜಿಲ್ ಮತ್ತು ದಕ್ಷಿಣ ಅಮೇರಿಕದ ಕೆಲವೆಡೆಗಳಲ್ಲಿ ತಾನು ಕಂಡ ಕನಸೊಂದದು ಅರ್ಥೈಸಿ ಹೆಸರನ್ನು ಸೂಚಿಸುವಂತೆ ಮಗುವಿನ ತಂದೆ ತಾಯಿಗಳು ಕುಲಪುರೊಹಿತರನ್ನು ಕೇಳಿಕೊಳ್ಳುತ್ತಾರೆ. ನ್ಯೂಗಿನಿ ಮತ್ತು ಬೆಲ್ಜಿಯನ್ ಕಾಂಗೋಗಳಲ್ಲಿ ಮಗುವಿನ ವರ್ತನೆಯ ಅಧಾರದ ಮೇಲೆ ಹೆಸರನ್ನು ಆಯ್ಕೆ ಮಾಡುತ್ತಾರೆ. ಪೂರ್ವಜರ ಗುಣಗಳು ಮಗುವಿನಲ್ಲಿ ಕಾಣಿಸಿದರೆ ಅವರ ಹೆಸರನ್ನೇ ಇಡುತ್ತಾರೆ. ನ್ಯೂಜಿûಲೆಂಡಿನಲ್ಲೂ ಮಕ್ಕಳಿಗೆ ಪೂರ್ವಿಕರ ಹೆಸರನ್ನು ಇಡುತ್ತಾರಾದರೂ ಆ ಮಗುವನ್ನು ಆ ಹೆಸರಿನಿಂದ ಕರೆದಾಗ ಅದು ಅಳಲು ಪ್ರಾರಂಭಿಸಿದರೆ ಅಥವಾ ಸೀನಿದರೆ ಮಗು ಆ ಹೆಸರನ್ನು ಪ್ರತಿಭಟಿಸುತ್ತದೆ ಎಂದು ತಿಳಿದು ಬೇರೊಂದು ಹೆಸರಿಡುತ್ತಾರೆ. ಕೊರಿಯದ ಜನರಲ್ಲಿ ಹೆಸರಿನ ಆಯ್ಕೆ ವಿಶಿಷ್ಟವಾಗಿರುತ್ತದೆ. ಅನಪೆಲ್ (ಮುದ್ದಿನ ದೊಡ್ಡಮ್ಮ ಎಂದರ್ಥ)ಎಂಬ ಪವಿತ್ರ ಕಲ್ಲಿನ ಸಹಾಯದಿಂದ ಹೆಸರನ್ನು ಗೊತ್ತುಪಡಿಸುತ್ತಾರೆ. ಅನಪೆಲ್ ಕಲ್ಲನ್ನು ಒಂದು ಕೋಲಿನ ಅಂಚಿಗೆ ಕಟ್ಟಿ ಹಿಂದೆಮುಂದೆ ತೂಗುಬಿಟ್ಟು, ಮಗುವಿನ ತಂದೆಯ ಸತ್ತ ಸಂಬಂಧಿಗಳ ಹೆಸರನ್ನು ಉಚ್ಚರಿಸತೊಡಗುತ್ತಾರೆ. ಯಾವ ಹೆಸರನ್ನು ಉಚ್ಚರಿಸಿದಾಗ ಕಲ್ಲಿನ ಓಟ ಜಾಸ್ತಿಯಾದಂತೆ ತೋರುತ್ತದೆಯೋ, ಅದೇ ಹೆಸರನ್ನು ಮಗುವಿಟ್ಟು ಇಟ್ಟು ನನ್ನ ಸತ್ತ ಬಂಧುವೊಬ್ಬ (ಉದಾ: ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ ಇತ್ಯಾದಿ) ಮತ್ತೆ ಜನಿಸಿಬಂದ ಎಂದು ಕೂಗುತ್ತಾ ತಂದೆ ಮಗುವನ್ನು ಎತ್ತಿಕೊಂಡು ಊರ ಬೀದಿಗಳಲ್ಲಿ ಬರುತ್ತಾನೆ.

	ವೈದಿಕ ಜನರಲ್ಲಿ ನಾಮಕರಣ ಶಿಷ್ಟರೂಪದ್ದಾಗಿರುತ್ತದೆ. ನಾಮಕರಣದ ದಿನ ಬ್ರಾಹ್ಮಣರಲ್ಲಿ ವಿನಾಯಕ ಪೂಜೆ, ಪುಣ್ಯಾಹ, ನಾಂದಿಕಾರ್ಯ ಮುಂತಾದವುಗಳಿರುತ್ತವೆ. ಬ್ರಾಹ್ಮಣರು ಮಗುವಿಗೆ ಎರಡು ಹೆಸರುಗಳನ್ನಿಡುವುದು ರೂಢಿಯಲ್ಲಿದೆ. ಒಂದು ರಹಸ್ಯ ಹೆಸರು ಮತ್ತೊಂದು ಸಾರ್ವಜನಿಕ ಹೆಸರು. ರಹಸ್ಯ ಹೆಸರನ್ನು ನಾಮಕರಣ ಸಮಾರಂಭಕ್ಕಿಂತ ಮೊದಲೇ ತಂದೆತಾಯಿಗಳು ಇಟ್ಟಿರುತ್ತಾರೆ. ಅವರಿಗೆ ಮಾತ್ರ ಆ ಹೆಸರು ತಿಳಿದಿರುತ್ತದೆ. ಸಾರ್ವಜನಿಕ ಹೆಸರನ್ನು ನಾಮಕರಣದ ದಿನ ಇಡುತ್ತಾರೆ. ಹೆಸರುಗಳ ಕೊನೆಯಲ್ಲಿ ಶರ್ಮ, ಭಟ್ಟ, ಶಾಸ್ತ್ರಿ ಮುಂತಾದುವುಗಳಲ್ಲದೆ ಪಂತವನ್ನು ಸೂಚಿಸುವ ಕೆಲವು ಅಂಕಿತಗಳು (ಉದಾ : ಅಯ್ಯಂಗಾರ್, ಆಚಾರ್, ಅಯ್ಯರ್ ಇತ್ಯಾದಿ) ಸಾಮಾನ್ಯವಾಗಿ ವಿಷ್ಣು ಅಥವಾ ಶಿವನ ಹೆಸರುಗಳೊಂದಿಗೆ ಸೇರಿಕೊಂಡಿರುತ್ತದೆ.

	ವೀರಶೈವರಲ್ಲಿ ಮಗು ಹುಟ್ಟಿದ 11 ಅಥವ 12 ನೆಯ ದಿನ ನಾಮಕರಣವಿರುತ್ತದೆ. ಆ ದಿನ ಜಂಗಮನನ್ನು ಆಹ್ವಾನಿಸಿ ಪಾದೋದಕದಿಂದ ಸೂತಕ ಕಳೆದುಕೊಳ್ಳುವ ಕಾರ್ಯ ಮುಗಿದ ಅನಂತರ ಕರ್ಣಭೋದ (ಪಂಚಾಕ್ಷರಿ ಮಂತ್ರವನ್ನು ಮಗುವಿನ ಕಿವಿಯಲ್ಲಿ ಪಠಿಸುವುದು) ಕಳಸಪೂಜೆಗಳು ನಡೆಯುತ್ತವೆ. ಮನೆಯವರ ಒಪ್ಪಿಗೆಯ ಮೇರೆಗೆ ಜಂಗಮ ನಾಮಕರಣ ಮಾಡುತ್ತಾನೆ. ಶಿವ ಪಾರ್ವತಿಯರಿಗೆ ಸಂಬಂಧಿಸಿದ ಹೆಸರುಗಳಲ್ಲದೆ ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿದ್ದ ವೀರಶೈವ ಸಂತರ ಹೆಸರುಗಳನ್ನು ಇಡುತ್ತಾರೆ. ಉದಾ :ಬಸವಲಿಂಗಪ್ಪ, ನೀಲಕಂಠ, ಚನ್ನಮ್ಮ, ಚನ್ನಮಲ್ಲಿಕಾರ್ಜುನ ಬಸವಣ್ಣ, ನೀಲಮ್ಮ, ಮಹಾದೇವಿ ಇತ್ಯಾದಿ. ತಮಿಳುನಾಡಿನಲ್ಲಿ ತಮಿಳು ಶ್ಯೆವಸಂತರ (ನಾಯನಾರರು) ಹೆಸರುಗಳನ್ನಿಡುವುದೂ ಕಂಡುಬರುತ್ತದೆ.

	ಜೈನರಲ್ಲೂ ನಾಮಕರಣ ಹೆಚ್ಚು ಸಂಪ್ರದಾಯಬದ್ದವಾಗಿರುತ್ತದೆ. ಮಗು ಹುಟ್ಟಿದ 12 ಅಥವ 14 ನೆಯ ದಿನ ಪುರುಡು ಕಳೆಯುವ ವಿಧಿಗಳನ್ನು ಮುಗಿಸಿ ಹೋಮ ಪುಣ್ಯಾಹಗಳನ್ನು ಕೈಗೊಳ್ಳುತ್ತಾರೆ. ಮಗುವಿನ ತಂದೆ ಸ್ನಾನ ಮುಗಿಸಿ ಹೊಸ ಉಡುಪು ಧರಿಸಿ ತಟ್ಟೆಯೊಂದರಲ್ಲಿ ತುಂಬಿಟ್ಟಿರುವ ಅಕ್ಕಿಯ ಮೇಲೆ ಮಗುವಿಗೆ ಇಡಬೇಕೆಂದಿರುವ ಹೆಸರನ್ನು ಅರಿಶಿನದ ಬೇರಿನಿಂದ ಬರೆಯುತ್ತಾನೆ. ಹಾಲು ಬೆಣ್ಣೆಯನ್ನಿಟ್ಟಿರುವ ಪಾತ್ರೆಯೊಂದರಲ್ಲಿ ಮಗುವಿಗೆ ತೊಡಿಸುವ ಆಭರಣಗಳನ್ನಿಟ್ಟಿರುತ್ತಾರೆ. ಅರ್ಹಂತನ ನೂರೆಂಟು ಹೆಸರುಗಳ ಪಠನದ ಅನಂತರ ಪುರೋಹಿತ ಮಗುವಿನ ಹೆಸರನ್ನು ಉಚ್ಚರಿಸುತ್ತಾನೆ. ತರುವಾಯ ತಂದೆ ಮಗುವಿನ ಕಿವಿಯಲ್ಲಿ ಆ ಹೆಸರನ್ನು ಉಚ್ಚರಿಸುತ್ತಾನೆ. ಸಂಜೆ ಅಗ್ನಿಗೆ ಆಘ್ರ್ಯ ಕೊಡುವುದು, ದಾನ ಇವೇ ಮುಂತಾದ ಕಾರ್ಯಕ್ರಮಗಳಿರುತ್ತವೆ.

	ಒಕ್ಕಲಿಗರಲ್ಲಿ ಸಾಮಾನ್ಯವಾಗಿ ದಾಸಯ್ಯನನ್ನೋ, ಜೋಯಿಸನನ್ನೋ ಕರೆಸಿ ನಾಮಕರಣ ಮಾಡಿಸುವುದುಂಟು. ಮೈಸೂರಿನ ಸುತ್ತಮುತ್ತಲ ಕೆಲವೆಡೆ (ವಿಶೇಷವಾಗಿ ಪಿರಿಯಾಪಟ್ಟಣ, ಕೆ.ಆರ್. ನಗರ ತಾಲ್ಲೂಕುಗಳಲ್ಲಿ) ಒಕ್ಕಲಿಗರಲ್ಲಿನ ನಾಮಕರಣ ವಿಶಿಷ್ಟವಾಗಿರುತ್ತದೆ. ಮಗು ಹುಟ್ಟಿದ 12 ನೆಯ ದಿನ ಮುತ್ತೈದೆಯರೆಲ್ಲ ಸೇರಿ ಮಗು ಬಾಣಂತಿಯರಿಗೆ ಸ್ನಾನ ಮಾಡಿಸುತ್ತಾರೆ. ಮನೆಯ ಯಾವ ಸ್ಥಳದಲ್ಲಿ ತಾಯಿಗೆ ಹೆರಿಗೆಯಾಯಿತೋ ಅಲ್ಲಿ ಒಂದು ಸಣ್ಣ ಕುಳಿ ತೋಡಿ, ಮಾಡಿರುವ ಅಡುಗೆಯನ್ನು ಎಡೆ ಇಟ್ಟು ಅದಕ್ಕೆ ಮಗುವನ್ನು ಅಡ್ಡಬೀಳಿಸಿ, ಜಿರಳೆಯೊಂದನ್ನು ಹಿಡಿದು ತಂದು ಕುಳಿಯಲ್ಲಿಟ್ಟು ಪ್ರಾಣಕ್ಕೆ ಪ್ರಾಣ ಎಂದು ಹೇಳುತ್ತಾ ಮಣ್ಣು ಮುಚ್ಚುತ್ತಾರೆ. ಇದಕ್ಕೆ ಗುಣಿಶಾಸ್ತ್ರ ಎಂದು ಹೆಸರು. ಮಧ್ಯಾಹ್ನ ಭೋಜನಕೂಟವಿರುತ್ತದೆ. ನೆಂಟರಿಷ್ಟರಿಗೆಲ್ಲ ಊಟಕ್ಕೆ ಬಡಿಸುವಾಗ ಸಂಬಂಧಿಕರ ಅಥವಾ ಮನೆಯ ಹಿರಿಯ ಹೆಂಗಸು ಮಗುವಿನ ಹೆಸರನ್ನು ಜೋರಾಗಿ ಕೂಗಿ ಹೇಳುತ್ತಾಳೆ (ಉದಾ: ಚನ್ನೇಗೌಡ ಕಣ್ರಪ್ಪೋ ಹೆಸರು). ಊಟ ಮುಗಿದ ಅನಂತರ ನೆಂಟರಿಷ್ಟರು ಬೆಣ್ಣೆಯಲ್ಲಿ ತೇಯ್ದಿಟ್ಟಿರುವ ಬಜೆ ಮಿಶ್ರಣವನ್ನು ಮಗುವಿನ ಬಾಯಿಗೆ ಸ್ವಲ್ಪ ಕೊಟ್ಟು , ಇಟ್ಟ ಹೆಸರಿನಿಂದ ಒಮ್ಮೆ ಕರೆದು ಉಡುಗೊರೆಯನ್ನೋ, ಹಣವನ್ನೋ ಮಗುವಿನ ಕೈಗೆ ಮುಟ್ಟಿಸಿ ತೊಟ್ಟಿಲಲ್ಲಿಟ್ಟು ತೂಗುತ್ತಾರೆ.

	ಅಗಸರಲ್ಲಿ ಸೂಲಗಿತ್ತಿಯೇ ಮಗುವಿಗೆ ನಾಮಕರಣ ಮಾಡುತ್ತಾಳೆ. ಸಗಣಿಯಿಂದ ಸಾರಿಸಿದ ನೆಲದ ಮೇಲೆ. ಕೆಮ್ಮಣ್ಣಿನಿಂದ ಮೂರು ಗೆರಯನ್ನೆಳೆದು ತಲೆಕೆಳಗಾಗಿ ಒಂದು ಮೊರವನ್ನು ಇಟ್ಟು ಅದಕ್ಕೆ ಪೂಜೆ ಮಾಡುತ್ತಾರೆ. ಸೂಲಗಿತ್ತಿ ಬಜೆಯಿಂದ ಬೆಣ್ಣೆಯನ್ನು ಮಗುವಿನ ಬಾಯಿಗೆ ಕೊಟ್ಟು, ಗೊತ್ತುಪಡಿಸಿದ ಹೆಸರಿನಿಂದ ಒಮ್ಮೆ ಜೋರಾಗಿ ಕರೆದು ಅಲ್ಲಿ ಸೇರಿದ್ದ ಮಕ್ಕಳಿಂದಲೂ ಜೋರಾಗಿ ಕೂಗಿಸುತ್ತಾಳೆ. ಹೆಸರಿಟ್ಟ ಮೇಲೆ ಮಗುವಿಗೆ ಕಾಯಿಲೆ ಮುಂತಾದ ತೊಂದರೆಗಳು ಬಂದರೆ, ಹೆಸರನ್ನು ಬದಲಾಯಿಸುವುದುಂಟು. ಅಗಸರಲ್ಲಿ ಅಪ್ಪಾಜಿ, ಮುನಿಯ, ಅಪ್ಪಯ್ಯ, ಸಂಜೀವ, ಪುಟ್ಟಸ್ವಾಮಿ, ಹನುಮ ಎಂಬ ಹೆಸರುಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

	ಕರ್ನಾಟಕದ ಗುಡ್ಡಗಾಡಿನ ಹಿಂದುಳಿದ ಜನರಲ್ಲಿ ನಾಮಕರಣ ಹೆಚ್ಚು ವಿಧಿಗಳಿಂದ ಕೂಡಿರದೇ ಸರಳವಾಗಿರುತ್ತದೆ. ದಾಸಯ್ಯನನ್ನೂ, ಹಟ್ಟಿಯ ಮುಖ್ಯಸ್ಥನನ್ನು ಆಹ್ವಾನಿಸಿ ನಾಮಕರಣ ಮಾಡಿಸುತ್ತಾರೆ. ಗೊಲ್ಲರು ಯಾವುದಾದರೊಂದು ಬೆಸ ಸಂಖ್ಯೆಯ ದಿನ ಮಗುವಿಗೆ ನಾಮಕರಣ ಮಾಡುತ್ತಾರೆ. ವಿವಿಧ ಜಾತಿಯ ಮರದ ಎಲೆಗಳಿಂದ ನೀರನ್ನು ಕಾಯಿಸಿ ಮಗು ಮತ್ತು ತಾಯಿಗೆ ಸ್ನಾನ ಮಾಡಿಸುತ್ತಾರೆ. ಗಂಡು ಮಗುವಾಗಿದ್ದರೆ ಅದರ ಕೈಗೆ ಉಣ್ಣೆಯ ದಾರದಿಂದ ಬಜೆಯ ತುಂಡೊಂದನ್ನು ಕಟ್ಟುತ್ತಾರೆ. ಸಂಜೆ ಹಟ್ಟಿಯ ಅಥವಾ ಮನೆಯ ಹಿರಿಯ ಹೆಂಗಸು ಕಣಿಗಾರನನ್ನು ಕಂಡು ಇಡಬೇಕಾದ ಹೆಸರನ್ನು ಅವನಿಂದ ಕೇಳಿಕೊಳ್ಳುವುದು ರೂಢಿಯಲ್ಲಿದೆ. ಗೊಲ್ಲರಲ್ಲಿ ವಿಷ್ಣುವಿನ ಹೆಸರುಗಳಲ್ಲದೇ ಕೆಲವು ಅಡ್ಡ ಹೆಸರುಗಳಾದ ಕಾಟ, ಡೊಂಗ, ಜುಂಜ, ಕರಿಯ ಇತ್ಯಾದಿಗಳು ಇರುತ್ತವೆ. ಹೊರ ದೇಶದ ಕೆಲವು ಗುಡ್ಡಗಾಡಿನ ಜನ ಮಾಟಗಾರ ಅಥವಾ ಮಾಟಗಾತಿಯರಿಂದ ನಾಮಕರಣ ಮಾಡಿಸುತ್ತಾರೆ. ಫಿನ್ ಜನರಲ್ಲಿ ಮಂತ್ರವಾದಿ ಮಗುವನ್ನು ಕೈಗೆ ಎತ್ತಿಕೊಂಡು ಮಗು ಅಳಲು ಪ್ರಾರಂಭಿಸಿದಾಗ ಅದನ್ನು ಹಿಂದೆ ಮುಂದೆ ತೂಗುತ್ತಾ ಕೆಲವು ಹೆಸರುಗಳನ್ನು ಹೇಳಲು ಆರಂಭಿಸುತ್ತಾನೆ. ಯಾವ ಹೆಸರನ್ನು ಹೇಳುವಾಗ ಮಗು ಅಳು ನಿಲ್ಲಿಸುತ್ತದೆಯೋ ಅದೇ ಹೆಸರನ್ನು ಅದಕ್ಕೆ ಇಟ್ಟು ಪಾತ್ರೆಯೊಂದರಲ್ಲಿ ನೀರನ್ನು ಮಂತ್ರಿಸಿ ತಾಯಿ ಮತ್ತು ಮಗುವಿಗೆ ಕುಡಿಯಲು ಕೊಡುತ್ತಾನೆ. ಮಂತ್ರವಾದಿ ಆಯ್ಕೆ ಮಾಡಿ ಇಡುವ ಹೆಸರು ದೇವರಿಂದ ದಯಪಾಲಿಸಿದ್ದು ಎಂಬ ನಂಬಿಕೆ ಆ ಜನರಲ್ಲಿದೆ.

	ಪೆರು ದೇಶದ ಇಂಗ್ಕ ಜನ ಮುಡಿ ತೆಗೆಯುವ ಸಮಾರಂಭ ಮತ್ತು ನಾಮಕರಣಗಳನ್ನು ಒಟ್ಟಿಗೆ ನಡೆಸುತ್ತಾರೆ. ಮಗುವಿಗೆ 2-3 ವರ್ಷವಾದ ಅನಂತರ ಕುಟುಂಬದ ಹಿರಿಯ ವ್ಯಕ್ತಿ ಮಗುವಿನ ಮುಡಿ ತೆಗೆದು ಅದುವರೆಗೂ ತಾನು ಗೊತ್ತು ಮಾಡಿ ಇಟ್ಟುಕೊಂಡಿದ್ದ ಹೆಸರನ್ನು ಮಗುವಿಗೆ ಇಡುತ್ತಾನೆ. ಕ್ಯಾತೊಲಿಕ್ ಇಂಡಿಯನ್ನರು ಮತ್ತು ಬೊಲಿವಿನರಲ್ಲಿಯೂ, ಈ ಪದ್ದತಿ ಇದೆ. ಅದರೆ ಇವರಲ್ಲಿ ಧರ್ಮೀಯಪಿತನ ಪಾತ್ರ ಪ್ರಮುಖವಾಗಿರುತ್ತದೆ.

	ಮಹಮದೀಯರಲ್ಲಿ ಆಚರಣೆ ಒಂದೇ ರೀತಿ ಇರುವುದಿಲ್ಲ . ಕೆಲವರು ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ನಾಮಕರಣ ಮಾಡಿದರೆ ಮತ್ತೆ ಕೆಲವರು 14, 21, 28 ಅಥವಾ 35ನೆಯ ದಿನಗಳಲ್ಲಿ ನೇರವೇರಿಸುತ್ತಾರೆ. ನಾಮಕರಣ ಮತ್ತು ಅಕಿಖ್ಹಾ ನಡೆಸುವ ಪದ್ಧತಿಯು ಕೆಲವರಲ್ಲಿದೆ. ಗಂಡು ಜನಿಸಿದರೆ ಎರಡು ಮೇಕೆ ಅಥವಾ ಕುರಿ, ಹೆಣ್ಣು ಜನಿಸಿದರೆ ಯಾವುದಾದರು ಒಂದನ್ನು ಕಡಿದು ಸ್ವಲ್ಪ ರಕ್ತವನ್ನು ಮಗುವಿನ ತಲೆಗೆ ಹಚ್ಚಿ, ಪ್ರಾಣಿಯ ಒಂದು ಕಾಲಿನ ಮಾಂಸವನ್ನು ಸೂಲಗಿತ್ತಿಗೆ ಕೊಟ್ಟು ಉಳಿದುದರಿಂದ ತಮ್ಮ ನೆಂಟರಿಷ್ಟರಿಗೆ ಮತ್ತು ಬಡವರಿಗೆ ಔತಣವನ್ನೇರ್ಪಡಿಸುತ್ತಾರೆ.

	ಪೂರ್ವ ಆಫ್ರಿಕಾದ ಇಸ್ಲಾಂ ಧರ್ಮದ ಅನುಯಾಯಿಗಳಾದ ಸ್ವಾಹಿಲಿ ಬಂಟ ಜನರು ಮಗು ಹುಟ್ಟಿದ 40ನೆಯ ದಿನ ನಾಮಕರಣ ಮಾಡುತ್ತಾರೆ. ಆ ರಾತ್ರಿ ಬಂಧು ಮಿತ್ರರೆಲ್ಲ ಸೇರಿ ಮಗುವಿಗೆ ಜ್ಞಾನಸ್ನಾನ ಮಾಡಿಸುತ್ತಾರೆ. ಇಡೀ ರಾತ್ರಿ ಇಸ್ಲಾಂ ಧರ್ಮಗ್ರಂಥದ ಪಠಣವಿರುತ್ತದೆ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ (ಅದು ಪ್ರವಾದಿ ಹುಟ್ಟಿದ ಸಮಯವೆಂದು ನಂಬಿಕೆ) ಮಗುವಿಗೆ ನಾಮಕರಣ ಮಾಡುತ್ತಾರೆ.

	ಲ್ಯಾಪ್ ಜನ ಎರಡಾವರ್ತಿ ನಾಮಕರಣ ಮಾಡುವುದುಂಟು. ಚರ್ಚಿನಲ್ಲಿ ಮೊದಲು ನಾರ್ವೆ ಸಂಸ್ಕøತಿಗೆ ಸಂಬಧಿಸಿದ ಹೆಸರನ್ನು ಇಟ್ಟು ಜ್ಞಾನಸ್ನಾನ ಮಾಡಿಸುತ್ತಾರೆ. ಅನಂತರ ಮನೆಯಲ್ಲಿ ತಮ್ಮ ಸಂಪ್ರದಾಯದ ಹೆಸರೊಂದನ್ನು ಇಟ್ಟು ಮತ್ತೆ ತಾಯಿಯಿಂದ ಜ್ಞಾನಸ್ನಾನ ಮಾಡಿಸುತ್ತಾರೆ. ಸತ್ತ ಪೂರ್ವಿಕನೊಬ್ಬ ತಾಯಿಯ ಕನಸಿನಲ್ಲಿ ಕಾಣಿಸಿಕೊಂಡು ಹೆಸರನ್ನು ಸೂಚಿಸುತ್ತಾನಂತೆ. ಅಲ್ಲದೆ ಮಾಯಾ ತಮಟೆಯ ಸಹಾಯದಿಂದ ಯಾವ ಪೂರ್ವಜ ಮತ್ತೆ ಮಗುವಿನಲ್ಲಿ ಸೇರಿರಬಹುದು ಎಂಬುದನ್ನು ಇವರು ತಿಳಿದುಕೊಳ್ಳುವರಂತೆ.

	ಕ್ರೈಸ್ತರಲ್ಲೂ ಜ್ಞಾನಸ್ನಾನ ಮತ್ತು ನಾಮಕರಣ ಒಟ್ಟಿಗೆ ನಡೆಯುತ್ತವೆ. ಅವರು ಮಗುವಿಗೆ ಒಂದು ಅಥವಾ ಅನೇಕ ಹೆಸರುಗಳನ್ನಿಡಬಹುದು. ಆದರೆ ಒಂದಾದರು ಕ್ರೈಸ್ತಸಂತರಿಗೆ ಅಥವಾ ಕ್ರೈಸ್ತಮತಕ್ಕೆ ಸಂಬಧಿಸಿದ ಹೆಸರಾಗಿರಲೇಬೇಕು.

	ನಾಮಕರಣ ಸಂಪ್ರದಾಯ ಹಾಗೂ ನಂಬಿಕೆಗಳ ಆಚಾರಗಳ ಸಂಚಯವಾಗಿದೆ. ಮೇಲೆ ಹೇಳಿದ ಎಲ್ಲಾ ಜನರಲ್ಲೂ ನಾಮಕರಣದ ಮೂಲ ಕಲ್ಪನೆ ಉದ್ದೇಶ ಒಂದೇ ಆಗಿದ್ದರೂ ಆಚಾರಣಾ ವಿಧಾನದಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತವೆ.
(ಎಸ್.ಎಸ್.ಆರ್;ಎಸ್.ಎಸ್.ಜಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ